ಈ ಬದುಕು ಬರವಣಿಗೆ ಅನವರತ...

ಹೀಗೆ ಸ್ನೇಹಿತರ ಬ್ಲಾಗುಗಳನ್ನೆಲ್ಲಾ ತಡಕಾಡುತ್ತಿದ್ದಾಗ ನನಗೇ ನಾಚಿಕೆಯೆನಿಸಿದೆ. ಎಷ್ಟು ಜನ, ಅದ್ಯಾವ ಕೆಲಸದಲ್ಲಿದ್ದಾರೋ, ಅದೆಷ್ಟು ಬ್ಯುಸಿಯಾಗಿದ್ದಾರೋ, ಆದರೂ ಪ್ರತಿ ತಿಂಗಳಿಗೊಮ್ಮೆಯಾದರೂ ಬರೆಯುತ್ತಾರೆ. ಅವರಿಗನಿಸಿದ್ದನ್ನ, ಅವರ ಮನಸ್ಸಿಗೆ ತೋಚಿದ್ದನ್ನ, ಬರೆಯುತ್ತಾ ಕೊನೆಗೊಮ್ಮೆ ನಾ ಬರೆದಿರುವುದು ನಿಮಗೆ ಸರಿ ತಪ್ಪು ಎಂದೆನಿಸಿದರೆ ಒಂದು ಕಮೆಂಟ್ ನೀಡಿ ಎಂಬ ಕಳಕಳಿಯ ವಿನಂತಿಯೊಡನೆ ಮುಕ್ತಾಯಗೊಳಿಸುತ್ತಾರೆ. ಆದರೆ ನಾನೋ, ಮಾತಿಗೆ ಮುಂಚೆ ಬಹಳ ಬ್ಯುಸಿ ಎನ್ನುತ್ತಿರುತ್ತೇನೆ. ಕೆಲಸವಿರುತ್ತದೆ, ಸತ್ಯ. ಆದರೆ ಈ ಬ್ಲಾಗಿಗ ಜಗತ್ತಿನಲ್ಲಿರುವರೆಲ್ಲರಿಗಿಂತ ಬ್ಯುಸಿ ಎಂದುಕೊಳ್ಳುತ್ತಿದ್ದೇನಲ್ಲ, ಅದು ಯಾಕೆ ಎಂಬ ಪ್ರಶ್ನೆ ನನ್ನ ಕಾಡುತ್ತಿದೆ.

ಬರೆಯಬೇಕು ಎಂಬ ಉತ್ಕಟ ವಾಂಛೆಯೊಡನೆ ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುತ್ತೇನೆ. ಎಂತಹ ಉತ್ಕಟ ಮನಸ್ಥಿತಿಯಲ್ಲಿರುತ್ತೇನೆ ಎಂದರೆ ಕಾನೂರು ಹೆಗ್ಗಡತಿಯಂತಹ ಬ್ರಹತ್ ಗ್ರಂಥವೇ ನನ್ನ ತಲೆಯಿಂದ ಉದುರಿ ಅಕ್ಷರಗಳ ಮೂಲಕ ಗಣಕಕ್ಕೆ ಭಟ್ಟಿಯಿಳಿಸಿ ನನ್ನ ಬ್ಲಾಗು ಅಂತಹದೊಂದು ಕಾದಂಬರಿಯಿಂದ ತುಂಬಿಹೋಗಿ ಬಿಡುತ್ತೇನೋ ಎಂಬ ಭಯವಿರುತ್ತದೆ. ಹತ್ತಾರು ಪಾತ್ರಗಳು, ಸನ್ನಿವೇಶಗಳು ತಲೆಯಲ್ಲಿ ಕುಣಿಯುತ್ತಾ ನನ್ನನ್ನು ಹೀರೋ ಮಾಡು , ನನ್ನ ಪಾತ್ರಕ್ಕೆ ನ್ಯಾಯ ಒದಗಿಸು ಎಂದು ಬೇಡುತ್ತಿರುತ್ತವೆ. ಎಲ್ಲಿಂದ ಶುರು ಮಾಡಬೇಕು ಎಂಬ ಯೋಚನೆಯಲ್ಲಿ ಮುಳುಗುತ್ತಿದ್ದ ಹಾಗೆ ಒಂದೊಂದೇ ದೃಶ್ಯಗಳು ಹಗಲುಗನಸಂತೆ ಮೂಡುತ್ತಿರುತ್ತವೆ. ಮೊದಲ ಪ್ಯಾರಾ ತಯಾರಾಗಿ ಇನ್ನೇನು ಎರಡನೇ ಪ್ಯಾರಾ ಶುರು ಆಗುವಷ್ಟರಲ್ಲಿ ಯಾವುದೋ ಪುಟ್ಟ ಆತಂಕ ಮನಸ್ಸಲ್ಲಿ ಮೂಡುತ್ತದೆ. ಆ ಆತಂಕಕ್ಕೇನು ಕಾರಣವಿರೋದಿಲ್ಲ, ಆದರೂ ಆಗುತ್ತದೆ. ಈಗ ಎರಡನೇ ಪ್ಯಾರಾ ಮುಗಿಸುವಷ್ಟರಲ್ಲಿ ಮೊದಲ ಮತ್ತು ಎರಡನೇ ಪ್ಯಾರಾ ಏಕೋ ಬಿನ್ನವೆನಿಸುತ್ತದೆ. ಛೇ!, ಇದೇನಿದು ವ್ಯತ್ಯಾಸ ಎನಿಸುವಷ್ಟರಲ್ಲಾಗಲೇ ಕಾದಂಬರಿ ಬೇಡ, ಕಥೆ ಬರೆದುಬಿಡೋಣ ಎನ್ನಿಸತೊಡಗುತ್ತದೆ (ಅದ್ಯಾಕೆ ಈ ದ್ವಂದ್ವ).

ಆಯ್ತು ಕಥೆ ಬರೆಯೋಣ ಎಂದು ಇನ್ನು ಸ್ವಲ್ಪ ಮುಂದುವರಿಯುತ್ತಿದ್ದಂತೆ, ಅದ್ಯಾವುದೋ ಕಾರ್ಮೋಢ ಬಂದು ನನ್ನ ಮೆದುಳು ಮನಸ್ಸನ್ನು ಮುಚ್ಚಿ ಬೆರಳುಗಳನ್ನು ಕೀಲಿ ಮಣೆಯಿಂದ ದೂರ ಮಾಡುತ್ತವೆ. ಅತ್ತ ಇತ್ತ ಒದ್ದಾಡುತ್ತಿದ್ದ ಹಾಗೆ ಮನ ಮುದುರಿ ಈ ಕಥೆಗಳ ಸಹವಾಸ ಸಾಕು, ಒಂದು ಕವನ ಬರೆದುಬಿಡೋಣ ಎಂದುಕೊಂಡು ಅಕ್ಷರಗಳ ಕೂಡಿಡುತ್ತೇನೆ., ಅದೆಲ್ಲೋ ಒಂದು ಪದ ಮನಸ್ಸು ಮತ್ತು ಮೆದುಳಿನ ನಡುವೆ ಒದ್ದಾಡಿ ಸಿಕ್ಕಿಹಾಕಿಕೊಂಡುಬಿಡುತ್ತದೆ, ಅತ್ತ ಆಚೆಯೋ ಹಾಕದ, ಒಳಗೂ ಸೇರಿಸದ ಹಾಗೆ ಇಕ್ಕಟ್ಟು ಸೃಷ್ಟಿಸಿ ಬಿಡುತ್ತದೆ. ಅದಕ್ಕೇನೋ ದ್ವೇಷವೋ ನಾ ಕಾಣೆ. ಕೊನೆಗೂ ಒಂದು ಹನಿಗವನ ಬರೆದು ಎದ್ದೇಳುವಷ್ಟರಲ್ಲಿ ನಾಲ್ಕೈದು ಗಂಟೆ ಮುಗಿದಿರುತ್ತದೆ. ವಾಸ್ತವ ದಗ್ಗನೆ ಎದ್ದು ಕೂತು ಎಚ್ಚರಿಸಿತೊಡಗುತ್ತದೆ. ನಿನಗೇನಪ್ಪ, ಕಂಪ್ಯೂಟರಿನ ಮುಂದೆ ಕೂತರೆ ಆರಾಮಾಗಿರ್ತೀಯಾ, ಅಂತಾ ಮನೆಮಂದಿಯೆಲ್ಲಾ ಕುಕ್ಕುತ್ತಿರುತ್ತಾರೆ. ಅವರಿಗೇನು ಗೊತ್ತು ಅಂತಹಾ ಬೃಹತ್ ಕಾದಂಬರಿಯಿಂದ ಹನಿಗವನ ಮೂಡುವ ಒಳಗೆ ನನ್ನ ಮನದೊಳಗೆ ಆಗುವ ಪ್ರಸವ ವೇದನೆ.

ಎಲ್ಲ ಎಲ್ಲವನರಿದು ಫಲವೇನು
ಮತ್ತೆ ಎಲ್ಲ ಎಲ್ಲವನರಿದು ಫಲವೇನು?
ತನ್ನ ತಾನರಿಯದನ್ನಕ್ಕ?

ಹುಡುಕಿಕೊಡಿ ಪ್ಲೀಸ್..

ಏನೆಂದು ಬಣ್ಣಿಸಲಿ ನಿನ್ನ,
ನಿನ್ನ ಮಾಯೆ ಅಪೂರ್ವ,

ಮನಸಿನ ತುಂಬಾ ಮುಗಿಯದ
ಆಸೆ, ತೀರದ ದಾಹ.,
ತುಂಬಿದವಳು ನೀನಲ್ಲವೇ,

ಕನಸುಗಳು ತಂತಾನೆ ಕಣ್ಣೊಳಗೆ
ತುಂಬುತ್ತಿದ್ದವು., ಇಂದೇಕೋ
ಮನಸ್ಸಿಗೇ ಮುಚ್ಚಿದೆ ಕಾಡ್ಗತ್ತಲ್ಲು...

ಹಣವೇ , ನೀನೇಕೆ ಹೀಗೆ..?
ಸುಖವ ಹುಡಕುವ ಬರದಲ್ಲಿ
ಕಳೆದುಕೊಂಡೆನೇನೋ ನಾ ನನ್ನನ್ನೇ..

ನಿದಿರೆ...

ಹೊಂಗೆಯ ನೆರಳಲಿ
ಮಲಗಿದವನಿಗೆ ಸುಖ ನಿದ್ರೆ.,
ಚಿಂತೆಯಿಲ್ಲದವನಿಗೆ
ಸಂತೆಯಲ್ಲೂ ಸಿಹಿ ನಿದ್ರೆ.,
ಕುಡಿದವನಿಗೆ ಮೋರಿಯಲ್ಲೂ
ಮೈಮರೆತ ನಿದ್ರೆ.,
ಹಣದ ದಾಹ ತೀರದವಗೆ ಪಲ್ಲಂಗದಲ್ಲೂ
ಬರುವುದಿಲ್ಲ ಬರೀ ನಿದ್ರೆ.

ಆಸೆ

ಮುಸ್ಸಂಜೆ ಸೂರ್ಯನ
ಕೆಂಪಿಗೆ ಕೆಂಪಾದ ಹುಡುಗಿಯ
ಗಲ್ಲದ ಕುಳಿಯಲ್ಲಿ .. ನನ್ನನ್ನೇ ನಾ ಮರೆತು
ಮುಳುಗುವ ಆಸೆಯು ..

ಹಬೆಯಾಡೋ ಕಾಫಿಯು
ತುಟಿಯಂಚಲ್ಲಿ ಉಳಿಸಿದ
ಕಾಫಿಯನ್ನು, ಎನ್ನ
ತುಟಿಯಲ್ಲಿ ಸವಿಯುವ
ಮನದಾಸೆ ಮೂಡಿದೆ ..

ಮಳೆಹನಿ ಮೋಸದಿ ಹಾರುತ್ತಾ
ಗಾಳಿಗೆ ತೂರುತ್ತಾ,
ನನ್ನವಳೆದೆಯ ಮುಟ್ಟುವಾಗ,
ಆ ಬಾಗ್ಯವೂ ಇಲ್ಲದೆ ಒದ್ದಾಡೋ
ಮನಸ್ಸಿಗೆ ಬೇಡವೇ ಸಾಂತ್ವನ..

ಹಾಡಾಡೋ ಮನಸ್ಸಿನ
ನೆಮ್ಮದಿ ಕಳೆಯಲು
ಬೇಗನೇ ಓಡುವ
ಸಮಯವೂ ನಿಲ್ಲಬಾರದೇ...

ಒಪ್ಪಿಗೆ

ಯಾವ ಜನ್ಮದ ಮೈತ್ರಿ
ಈ ಜನ್ಮದಲ್ಲಿ ಬಂದು ನಮ್ಮಿಬ್ಬರನ್ನೂ
ಮತ್ತೆ ಬಂದಿಸಿಹುದೋ,
ಬರೀ ಅಚ್ಚರಿಗಳಿದ್ದವು ನನಗಂದು,
ಮೋಡ ಬಸಿರಾಗುವ ಬಗ್ಗೆ, ಬಿಸಿಲು ಮಳೆಯಾಗುವ ಬಗ್ಗೆ,
ಹೂವು ಹಾಡಾಗುವ ಬಗ್ಗೆ, ಈ ಹುಡುಗಿ ನನ್ನೆಲ್ಲಾ
ಅಚ್ಚರಿಗಳಿಗೆ ಅರ್ಥ ತುಂಬುತ್ತಾಳೆ ಅಂತ ಅನ್ನಿಸಿದ್ದೇ ತಡ ..
ಒಪ್ಪಿದೆ.. ಎಷ್ಟು ಮಾತಿಗೆ ಎಷ್ಟು ಮೌನ, ಬಲ್ಲವರ್ಯಾರು ?

ಭಯವಿದು..

ಕನಸುಗಳು ಕೂಡಾ ಒಮ್ಮೊಮ್ಮೆ

ಹಿತವಾಗಿ ಭಯ ಬೀಳಿಸುತ್ತವೆ..

ಎಲ್ಲೋ ಕಾಣದ ಕಣ್ಣೊಂದು ಬಿದ್ದು

ಕಾಣುವ ಕನಸು ಕೂಡಾ ಚೂರು ಚೂರು

ಆದೀತೆಂಬ ಭಯವದು..

ಗೆಳತಿ..

ನನಗೆ ಸುಳ್ಳನ್ನೆದೆರಿಸುವ

ತಾಕತ್ತಿದೆ ಗೆಳತಿ,

ಆದರೆ ಸುಳ್ಳನೇಳುವ

ಗೆಳತಿಯನ್ನಲ್ಲಾ...

ಸ್ನೇಹ ಅರಸುತ್ತಾ..

ಸತ್ತ ಬಿದಿರ ಕಾಗದದಲ್ಲಿ -

ಅರಳಿದ ಕವನದಲ್ಲೇಕೆ-

ಹುಡುಕುತ್ತಿ ಗೆಳತಿ.,

ನೀ ಕಟ್ಟಿದ ಕನಸುಗಳಾ.,

ಜಗಕೆ ಹೆದರಿ ಮುಚ್ಚಿಟ್ಟ ಮಾತುಗಳಾ.,

ಹಂಚಿಕೊಳ್ಳಲಾಗದ ಬಾವನೆಗಳಾ..



ದಿನಗಳುರುಳುವವು ಒಂದಾದೊಂದರಂತೆ.,

ಮುಚ್ಚಿಟ್ಟ ಮಾತು, ಹಂಚದ ಬಾವನೆ,

ಮರೆತ ಕನಸಂತಾದರೇನು ಚೆಂದ.,

ಸ್ಪಂದಿಸುವ ಹೃದಯ ಖಾಲಿ

ಕುಳಿತಿರುವಾಗ...



ಪ್ರೀತಿಯ ಪಿಸುಮಾತುಗಳೇ

ಕೋಟ್ಯಾಂತರ ಮೈಲಿ

ಚಲಿಸುವ ಕಾಲವಿದು..,

ನಿನ್ನ ಮನದ ಬಾವುಕತೆಗೆ

ಬೆಲೆಯಿಲ್ಲವೇ..,



ಇಲ್ಲಿದೆ ಹಚ್ಚನೆಯ ಬೆಚ್ಚನೆಯ -

ತುಂಟ ಹೃದಯ.,

ಹಂಚಿಕೊಳ್ಳಲು ಸ್ನೇಹವಾ..

ಕಲಿ ನಗುವನೆಂಬ ಭ್ರಮೆಯಲ್ಲಿ

ಕಲಿ ನಗುವನೆಂಬ ಭ್ರಮೆಯಲ್ಲಿ
ಕನಸುಗಳ ಕಟ್ಟಿಟ್ಟು ,
ಬದುಕ ಬೆಂಬತ್ತಿ
ಕತ್ತಲ ಕೊವೆಯೊಳಗೆ
ಆಳರಸನಾಗಲು ಹೊರಟಾಗ
ಭಾವನೆಗಳು ಕನ್ನೀರಿಟ್ಟವು

ಭಾವುಕ ಮನ
ಕತ್ತಲಾದೊಡನೆ ಅರಸುವುದು
ಕನಸುಗಳ ತೊಟ್ಟಿಲಲಿ
ತೂಗುಯ್ಯಾಲೆಯಾಡಿಸಲು
ಈ ಎನ್ನ ಮನವ..

ಕಪ್ಪು ಕೆಪ್ಪಾಗಿ
ಕಂಗಳು ಕೆಂಪಾದರೇನು ?
ಬುದ್ದಿ ಒಪ್ಪುವುದೇ ..
ಮನ ನಿನ್ನ ಅಡಿಯಾಳೆಂಬ
ಜಪ ತಪವಾಗಬೇಕಷ್ಟೇ ..

ಬೆಟ್ಟದ ತುದಿಯಲ್ಲಿ ಮನೆ ಮಾಡಿ
ಗಾಳಿಗೆ ಅಂಜಿದೊಡೆoತಯ್ಯಾ ?
ವೇಗಕ್ಕೆ ಕಿಚ್ಚು ಹೊತ್ತಿಸಿ
ಹತ್ತಿದ ಬದುಕ ರೈಲಿಳಿದರೆ
ಕಲಿ ಮೆಚ್ಚುವುನೆನಯ್ಯ ?

ಬಿಳಿ ಕೂದಲಿಗೆ ಮುಪ್ಪಡರಿ
ಪಸೆಯಾರಿದ ಕಂಗಳಲಿ
ಕನಸುಗಳ ಅರಸುತ್ತ
ಹಿಂದಿರುಗಿ ನೋಡಿದಾಗ
ಕಲಿ ನಕ್ಕನೆಂಬ ಭಯವೇ ?