ಕಾಣೆಯಾಗಿದೆ ...

ಬಾಷೆ ಮರೆಯಾಗಿ
ಮಾತುಕತೆ ಕತೆಯಾಗಿ
ಸಂಬಂಧಗಳ ನಡುವೆ
ಒಂದೊಂದು ಅಕ್ಷರಗಳು
ಗೊಂಬೆಗಳ ರೀತಿ
ಚರ್ಚೆಯಾಗಿ -
ಮಾಯವಾಗಿದೆ -
ಬ್ರಾತೃತ್ವದ ಜಾದು ...

ನನ್ನ ಮಗುವಿಗೆ

ಮಲಗು ಮಗುವೇ ಮಲಗು ||
ಜೋ ಜೋ ಲಾಲಿಜ ... ||

ಚಂದಿರ ಬಂದಿಹನು ತಾರೆಗಳ ಜತೆಗೂಡಿ
ಕನಸನ್ನು ಹೊತ್ತುಕೊಂಡು ||

ಹಕ್ಕಿಗಳು ಮಲಗಿಹವು ಮರಿಗಳ ಜತೆಗೂಡಿ
ಗೂಡಲ್ಲಿ ಹೊದ್ದುಕೊಂಡು ||

ಹೂವುಗಳು ಮುದುರಿಹವು ಸೂರ್ಯನ ಬೆಳಗು
ಕಾಯ್ದುಕೊಂಡು ||

ಲಾಲಿ ಜೋ ಜೋ ಲಾ ||

ಮಿಥ್ಯದಲ್ಲಿನ ಸತ್ಯ

ಸತ್ಯವೆನಿತು
ಸತ್ಯವಾಗುವುದು ?
ನೀನು ಅರ್ಥ
ಮಾಡಿಕೊಂಡ ಸತ್ಯ
ಪರರ ಅರ್ಥಕೋಶದಲ್ಲೂ
ಸತ್ಯವಾದರೆ ಸತ್ಯ.,
ಇಲ್ಲದಿರೆ
ಸತ್ಯ ಬರೇ ಮಿಥ್ಯ...

ನನಗಂದು ನೀ ಬೇಕು ಗೆಳತಿ...

ಗೆಳತೀ.. ಒಮ್ಮೆ ಕರೆದು ನೋಡು
ನೀ ದುಃಖತಪ್ತಳಾಗಿ ಅಳುವಾಗ,
ನಾ ಆಣೆ ಮಾಡಿ ಹೇಳುವುದಿಲ್ಲ
ನಿನ್ನನ್ನು ನಗಿಸುತ್ತೇನೆ ಎಂದು !!!
ಆದರೆ ನಿನ್ನೊಡನೆ ಅಳಬಲ್ಲೆ ನಾ...

ಗೆಳತೀ.. ಒಮ್ಮೆ ಕರೆದು ನೋಡು
ಈ ಜೀವನ ಜಿಗುಪ್ಸೆ ಹುಟ್ಟಿಸಿದಾಗ,
ನಾ ಆಣೆ ಮಾಡಿ ಹೇಳುವುದಿಲ್ಲ
ನಿನ್ನ ಜೀವನ್ಮುಖಿ ಮಾಡಬಲ್ಲೆ ಎಂದು !!!
ಆದರೆ ನಿನ್ನ ಜೊತೆ ನೀಡಬಲ್ಲೆ ನಾ...

ಗೆಳತೀ.. ಒಮ್ಮೆ ಕರೆದು ನೋಡು
ನಿನಗ್ಯಾರೂ ಬೇಡವೆನ್ನಿಸಿದಾಗ,
ನಾ ಆಣೆ ಮಾಡಿ ಹೇಳುವುದಿಲ್ಲ
 ನಿನ್ನ ಮನಕೆ ಉತ್ಸಾಹ ತುಂಬುವೆ ಎಂದು !!!
ಆದರೆ ನಿನ್ನ ಮೌನಕೆ ಮೌನವಾಗಬಲ್ಲೆ ನಾ...

ಗೆಳತೀ.. ಒಮ್ಮೆ ಕರೆದು ನೋಡು
ಕಷ್ಟ ಕಾರ್ಪಣ್ಯ ನಿನ್ನ ಕವಿದಾಗ,
ನಾ ಆಣೆ ಮಾಡಿ ಹೇಳುವುದಿಲ್ಲ
ನಿನ್ನ ಅವುಗಳಿಂದ ಮುಕ್ತಗೊಳಿಸುವೆ ಎಂದು !!!
ಆದರೆ ನಿನ್ನ ಕೈಹಿಡಿದು -
ಜೊತೆಜೊತೆಯಾಗ ನಡೆಯಬಲ್ಲೆ ನಾ...

ಆದರೊಂದು ದಿನ
ನೀ ನನ್ನ ಕರೆದು ನನ್ನಿಂದ
ಪ್ರತ್ಯುತ್ತರ ಬರದಿದ್ದರೆ.,
ಓಡೋಡಿ ಬಾ ಗೆಳತಿ...
ನೀ ಬೇಕು ನನಗಂದು

ಈ ಬದುಕು ಬರವಣಿಗೆ ಅನವರತ...

ಹೀಗೆ ಸ್ನೇಹಿತರ ಬ್ಲಾಗುಗಳನ್ನೆಲ್ಲಾ ತಡಕಾಡುತ್ತಿದ್ದಾಗ ನನಗೇ ನಾಚಿಕೆಯೆನಿಸಿದೆ. ಎಷ್ಟು ಜನ, ಅದ್ಯಾವ ಕೆಲಸದಲ್ಲಿದ್ದಾರೋ, ಅದೆಷ್ಟು ಬ್ಯುಸಿಯಾಗಿದ್ದಾರೋ, ಆದರೂ ಪ್ರತಿ ತಿಂಗಳಿಗೊಮ್ಮೆಯಾದರೂ ಬರೆಯುತ್ತಾರೆ. ಅವರಿಗನಿಸಿದ್ದನ್ನ, ಅವರ ಮನಸ್ಸಿಗೆ ತೋಚಿದ್ದನ್ನ, ಬರೆಯುತ್ತಾ ಕೊನೆಗೊಮ್ಮೆ ನಾ ಬರೆದಿರುವುದು ನಿಮಗೆ ಸರಿ ತಪ್ಪು ಎಂದೆನಿಸಿದರೆ ಒಂದು ಕಮೆಂಟ್ ನೀಡಿ ಎಂಬ ಕಳಕಳಿಯ ವಿನಂತಿಯೊಡನೆ ಮುಕ್ತಾಯಗೊಳಿಸುತ್ತಾರೆ. ಆದರೆ ನಾನೋ, ಮಾತಿಗೆ ಮುಂಚೆ ಬಹಳ ಬ್ಯುಸಿ ಎನ್ನುತ್ತಿರುತ್ತೇನೆ. ಕೆಲಸವಿರುತ್ತದೆ, ಸತ್ಯ. ಆದರೆ ಈ ಬ್ಲಾಗಿಗ ಜಗತ್ತಿನಲ್ಲಿರುವರೆಲ್ಲರಿಗಿಂತ ಬ್ಯುಸಿ ಎಂದುಕೊಳ್ಳುತ್ತಿದ್ದೇನಲ್ಲ, ಅದು ಯಾಕೆ ಎಂಬ ಪ್ರಶ್ನೆ ನನ್ನ ಕಾಡುತ್ತಿದೆ.

ಬರೆಯಬೇಕು ಎಂಬ ಉತ್ಕಟ ವಾಂಛೆಯೊಡನೆ ಕಂಪ್ಯೂಟರಿನ ಮುಂದೆ ಕುಳಿತುಕೊಳ್ಳುತ್ತೇನೆ. ಎಂತಹ ಉತ್ಕಟ ಮನಸ್ಥಿತಿಯಲ್ಲಿರುತ್ತೇನೆ ಎಂದರೆ ಕಾನೂರು ಹೆಗ್ಗಡತಿಯಂತಹ ಬ್ರಹತ್ ಗ್ರಂಥವೇ ನನ್ನ ತಲೆಯಿಂದ ಉದುರಿ ಅಕ್ಷರಗಳ ಮೂಲಕ ಗಣಕಕ್ಕೆ ಭಟ್ಟಿಯಿಳಿಸಿ ನನ್ನ ಬ್ಲಾಗು ಅಂತಹದೊಂದು ಕಾದಂಬರಿಯಿಂದ ತುಂಬಿಹೋಗಿ ಬಿಡುತ್ತೇನೋ ಎಂಬ ಭಯವಿರುತ್ತದೆ. ಹತ್ತಾರು ಪಾತ್ರಗಳು, ಸನ್ನಿವೇಶಗಳು ತಲೆಯಲ್ಲಿ ಕುಣಿಯುತ್ತಾ ನನ್ನನ್ನು ಹೀರೋ ಮಾಡು , ನನ್ನ ಪಾತ್ರಕ್ಕೆ ನ್ಯಾಯ ಒದಗಿಸು ಎಂದು ಬೇಡುತ್ತಿರುತ್ತವೆ. ಎಲ್ಲಿಂದ ಶುರು ಮಾಡಬೇಕು ಎಂಬ ಯೋಚನೆಯಲ್ಲಿ ಮುಳುಗುತ್ತಿದ್ದ ಹಾಗೆ ಒಂದೊಂದೇ ದೃಶ್ಯಗಳು ಹಗಲುಗನಸಂತೆ ಮೂಡುತ್ತಿರುತ್ತವೆ. ಮೊದಲ ಪ್ಯಾರಾ ತಯಾರಾಗಿ ಇನ್ನೇನು ಎರಡನೇ ಪ್ಯಾರಾ ಶುರು ಆಗುವಷ್ಟರಲ್ಲಿ ಯಾವುದೋ ಪುಟ್ಟ ಆತಂಕ ಮನಸ್ಸಲ್ಲಿ ಮೂಡುತ್ತದೆ. ಆ ಆತಂಕಕ್ಕೇನು ಕಾರಣವಿರೋದಿಲ್ಲ, ಆದರೂ ಆಗುತ್ತದೆ. ಈಗ ಎರಡನೇ ಪ್ಯಾರಾ ಮುಗಿಸುವಷ್ಟರಲ್ಲಿ ಮೊದಲ ಮತ್ತು ಎರಡನೇ ಪ್ಯಾರಾ ಏಕೋ ಬಿನ್ನವೆನಿಸುತ್ತದೆ. ಛೇ!, ಇದೇನಿದು ವ್ಯತ್ಯಾಸ ಎನಿಸುವಷ್ಟರಲ್ಲಾಗಲೇ ಕಾದಂಬರಿ ಬೇಡ, ಕಥೆ ಬರೆದುಬಿಡೋಣ ಎನ್ನಿಸತೊಡಗುತ್ತದೆ (ಅದ್ಯಾಕೆ ಈ ದ್ವಂದ್ವ).

ಆಯ್ತು ಕಥೆ ಬರೆಯೋಣ ಎಂದು ಇನ್ನು ಸ್ವಲ್ಪ ಮುಂದುವರಿಯುತ್ತಿದ್ದಂತೆ, ಅದ್ಯಾವುದೋ ಕಾರ್ಮೋಢ ಬಂದು ನನ್ನ ಮೆದುಳು ಮನಸ್ಸನ್ನು ಮುಚ್ಚಿ ಬೆರಳುಗಳನ್ನು ಕೀಲಿ ಮಣೆಯಿಂದ ದೂರ ಮಾಡುತ್ತವೆ. ಅತ್ತ ಇತ್ತ ಒದ್ದಾಡುತ್ತಿದ್ದ ಹಾಗೆ ಮನ ಮುದುರಿ ಈ ಕಥೆಗಳ ಸಹವಾಸ ಸಾಕು, ಒಂದು ಕವನ ಬರೆದುಬಿಡೋಣ ಎಂದುಕೊಂಡು ಅಕ್ಷರಗಳ ಕೂಡಿಡುತ್ತೇನೆ., ಅದೆಲ್ಲೋ ಒಂದು ಪದ ಮನಸ್ಸು ಮತ್ತು ಮೆದುಳಿನ ನಡುವೆ ಒದ್ದಾಡಿ ಸಿಕ್ಕಿಹಾಕಿಕೊಂಡುಬಿಡುತ್ತದೆ, ಅತ್ತ ಆಚೆಯೋ ಹಾಕದ, ಒಳಗೂ ಸೇರಿಸದ ಹಾಗೆ ಇಕ್ಕಟ್ಟು ಸೃಷ್ಟಿಸಿ ಬಿಡುತ್ತದೆ. ಅದಕ್ಕೇನೋ ದ್ವೇಷವೋ ನಾ ಕಾಣೆ. ಕೊನೆಗೂ ಒಂದು ಹನಿಗವನ ಬರೆದು ಎದ್ದೇಳುವಷ್ಟರಲ್ಲಿ ನಾಲ್ಕೈದು ಗಂಟೆ ಮುಗಿದಿರುತ್ತದೆ. ವಾಸ್ತವ ದಗ್ಗನೆ ಎದ್ದು ಕೂತು ಎಚ್ಚರಿಸಿತೊಡಗುತ್ತದೆ. ನಿನಗೇನಪ್ಪ, ಕಂಪ್ಯೂಟರಿನ ಮುಂದೆ ಕೂತರೆ ಆರಾಮಾಗಿರ್ತೀಯಾ, ಅಂತಾ ಮನೆಮಂದಿಯೆಲ್ಲಾ ಕುಕ್ಕುತ್ತಿರುತ್ತಾರೆ. ಅವರಿಗೇನು ಗೊತ್ತು ಅಂತಹಾ ಬೃಹತ್ ಕಾದಂಬರಿಯಿಂದ ಹನಿಗವನ ಮೂಡುವ ಒಳಗೆ ನನ್ನ ಮನದೊಳಗೆ ಆಗುವ ಪ್ರಸವ ವೇದನೆ.

ಎಲ್ಲ ಎಲ್ಲವನರಿದು ಫಲವೇನು
ಮತ್ತೆ ಎಲ್ಲ ಎಲ್ಲವನರಿದು ಫಲವೇನು?
ತನ್ನ ತಾನರಿಯದನ್ನಕ್ಕ?

ಹುಡುಕಿಕೊಡಿ ಪ್ಲೀಸ್..

ಏನೆಂದು ಬಣ್ಣಿಸಲಿ ನಿನ್ನ,
ನಿನ್ನ ಮಾಯೆ ಅಪೂರ್ವ,

ಮನಸಿನ ತುಂಬಾ ಮುಗಿಯದ
ಆಸೆ, ತೀರದ ದಾಹ.,
ತುಂಬಿದವಳು ನೀನಲ್ಲವೇ,

ಕನಸುಗಳು ತಂತಾನೆ ಕಣ್ಣೊಳಗೆ
ತುಂಬುತ್ತಿದ್ದವು., ಇಂದೇಕೋ
ಮನಸ್ಸಿಗೇ ಮುಚ್ಚಿದೆ ಕಾಡ್ಗತ್ತಲ್ಲು...

ಹಣವೇ , ನೀನೇಕೆ ಹೀಗೆ..?
ಸುಖವ ಹುಡಕುವ ಬರದಲ್ಲಿ
ಕಳೆದುಕೊಂಡೆನೇನೋ ನಾ ನನ್ನನ್ನೇ..